ಕೊಲ್ಲಂ

ಕೇರಳ ರಾಜ್ಯದ ಮಲಬಾರ್ ತೀರದ ಒಂದು ಹಳೆಯ ರೇವು ಪಟ್ಟಣ; ಅದೇ ಹೆಸರಿನ ಜಿಲ್ಲೆ. ಕೊಲ್ಲಂ ನಗರ ತಿರುವಾಂಕೂರಿಗೆ 45 ಮೈ. ಉತ್ತರದಲ್ಲಿ ಅಷ್ಟಮುಡಿ ಸರೋವರದ ಮೇಲಿದೆ. ಕೇರಳದ ವಿಸ್ತøತ ಹಿನ್ನೀರಿನ ನೌಕಾವ್ಯವಸ್ಥೆಯ ಮುಖ್ಯ ಕೇಂದ್ರಗಳಲ್ಲೊಂದಾಗಿರುವುದರಿಂದ ಇದು ವಾಣಿಜ್ಯ ಪ್ರಾಮುಖ್ಯವುಳ್ಳದ್ದಾಗಿದೆ. ಅಲಪ್ಪುಳ-ಕೊಚ್ಚಿಗಳಿಗೂ ಕೊಲ್ಲಂಗೂ ಕಾಲುವೆಗಳ ಮೂಲಕ ಸಂಬಂಧ ಏರ್ಪಟ್ಟಿದೆ. ಇಲ್ಲಿಂದ ಎರ್ನಾಕುಲಂ, ತಿರವಾಂಕೂರು ಮತ್ತು ಷೆನ್‍ಕೊಟ್ಟಗಳಿಗೆ ರೈಲುಮಾರ್ಗಗಳುಂಟು. 

ಇಲ್ಲಿಯ ರೇವು ಬಹು ಹಿಂದಿನ ಕಾಲದಿಂದ ಚೀನೀ ಮತ್ತು ಅರಬ್ ವರ್ತಕರಿಗೆ ಪರಿಚಯವಿತ್ತೆಂದು ತಿಳಿದು ಬರುತ್ತದೆ. ಮಾರ್ಕೋ ಪೋಲೊ ಇದನ್ನು ಕೊಯಿಲುಂ ಎಂದು ಕರೆದಿದ್ದ. 1503ರಲ್ಲಿ ಪೋರ್ಚುಗೀಸರು ಇಲ್ಲಿ ಒಂದು ಕೋಟೆ ಕಟ್ಟಿದರು. 1662ರಲ್ಲಿ ಇದನ್ನು ಡಚ್ಚರು ವಶಪಡಿಸಿಕೊಂಡರು. ಅನಂತರ ಇದು ಇಂಗ್ಲಿಷರ ವಶವಾಯಿತು. ಹಿಂದಿನ ತಿರುವಾಂಕೂರು ಸಂಸ್ಥಾನದ ರಾಜರ ಅರಮನೆಯೊಂದು ಕೊಲ್ಲಂನಲ್ಲಿದೆ. ಹತ್ತಿ ಜವಳಿ ಮತ್ತು ಹೆಂಚು ತಯಾರಿಕೆ ಇಲ್ಲಿಯ ಮುಖ್ಯ ಕೈಗಾರಿಕೆಗಳು. ಇಲ್ಲಿಂದ ತೆಂಗು, ಮರದ ದಿಮ್ಮಿ, ಗೋಡಂಬಿ, ಬಟ್ಟೆ, ಅಲ್ಯೂಮಿನಿಯಂ ಮುಂತಾದ ಪದಾರ್ಥಗಳು ರಫ್ತಾಗುತ್ತವೆ. ಕೊಲ್ಲಂ ಒಂದು ಮುಖ್ಯ ಶಿಕ್ಷಣ ಕೇಂದ್ರ. ಕೇರಳ ವಿಶ್ವವಿದ್ಯಾಲಯದಿಂದ ಮನ್ನಣೆ ಪಡೆದ ಮೂರು ಕಾಲೇಜುಗಳು ಇಲ್ಲಿವೆ. ನಗರದ ಜನಸಂಖ್ಯೆ 1,24,072(1971). ಸು. 4,600 ಚ.ಕಿಮೀ ವಿಸ್ತೀರ್ಣ ಇರುವ ಜಿಲ್ಲೆಯ ಜನಸಂಖ್ಯೆ 24,06,435 (1971).
(ಎಸ್.ಎಸ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ